ಕೊರೆತ

ಕಾಯಕವಸ್ತುವಿನಲ್ಲಿ ಮೊದಲೇ ಇರುವ ರಂಧ್ರದ ಅಳತೆಯನ್ನು ಬಹುಮಟ್ಟಿಗೆ ಹೆಚ್ಚಿಸುವ ಯಂತ್ರಕ್ರಿಯೆ (ಬೋರಿಂಗ್). ಮೊದಲೇ ಇರುವ ರಂಧ್ರ ಎರಕ ಹೊಯ್ಯುವಾಗ ಮಾಡಿದ ಪೊಳ್ಳಿನಿಂದ (ಕೋರ್), ಛಿದ್ರಣದಿಂದ (ಪಂಚಿಂಗ್) ಅಥವಾ ಬೈರಿಗೆಯಿಂದ (ಡ್ರಿಲ್ಲಿಂಗ್) ಆಗಿರಬಹುದು. ಸಾಮಾನ್ಯವಾಗಿ ಬೈರಿಗೆಗೆ ಮೀರದ ವ್ಯಾಸ ಪಡೆಯಲು ಕೊರೆಯುವ ವಿಧಾನವನ್ನು ಬಳಸುತ್ತಾರೆ. ಒಳದೂಡುವುದು (ರೀಮಿಂಗ್) ಸಹ ರಂಧ್ರದ ಅಳತೆ ಹೆಚ್ಚಿಸುವ ಕ್ರಿಯೆಯಾದರೂ ಇದಕ್ಕೂ ಕೊರೆಯುವುದಕ್ಕೂ ವ್ಯತ್ಯಾಸ ಉಂಟು. ಒಳದೂಡುವ ಕ್ರಿಯೆಯನ್ನು ಸುಮಾರಾಗಿ ಅಳತೆಗಿರುವ ರಂಧ್ರವನ್ನು ಸರಿ ಅಳತೆಗೆ ತರಲು ಹಾಗೂ ಒಪ್ಪ ಕೊಡಲು (ಫಿನಿಶಿಂಗ್) ಬಳಸುತ್ತಾರೆ. ಆದರೆ ಕೊರೆಯುವುದರಿಂದ ರಂಧ್ರದ ಅಳತೆಯನ್ನು ಅನೇಕಪಟ್ಟು ಹೆಚ್ಚಿಸಬಹುದು. ಒಳದೂಡುವ ಹತಾರಕ್ಕೆ ಅನೇಕ ಕರ್ತನಧಾರಗಳಿದ್ದರೆ (ಕಟ್ಟಿಂಗ್ ಎಡ್ಜಸ್) ಕೊರೆಯುವ ಹತಾರಕ್ಕೆ ಸಾಮಾನ್ಯವಾಗಿ ಒಂದೇ ಒಂದು ಕರ್ತನಧಾರವಿರುತ್ತದೆ.

ಕೊರೆಯುವುದಕ್ಕೆ ಕಾರಣ: ಬೈರಿಗೆಯ ಹತಾರ ಆದಿಯಲ್ಲಿ ಸರಿಯಾದ ರಂಧ್ರ ಮಾಡುತ್ತದೆ. ಆದರೆ ಬೈರಿಗೆ ಮುಂದುವರಿದಂತೆ ಮಾರ್ಗಮಧ್ಯೆ ಸಿಕ್ಕುವ ಪೊಳ್ಳು (ಬ್ಲೋ ಹೋಲ್), ಗಡಸುಗಂಟು ಮುಂತಾದವು ಹತಾರವನ್ನು ತಡೆಯುವುದರಿಂದ ಅದು ನಡುಗಿ ರಂಧ್ರ ಕೆಡುತ್ತದೆ. ಈ ರಂಧ್ರಕ್ಕೆ ಒಪ್ಪ ನೀಡಲು ಒಳದೂಡುವ ಹತಾರವನ್ನು ಬಳಸಿದಾಗ ಅದು ಬೈರಿಗೆಯ ಮಾರ್ಗವನ್ನೇ ಅನುಸರಿಸುವುದರಿಂದ ಆದ ತಪ್ಪು ಸರಿಹೋಗದೆ ಉಳಿದುಕೊಳ್ಳುತ್ತದೆ. ಇದನ್ನು ತಪ್ಪಿಸಲು ಕೊರೆಯುವ ವಿಧಾನ ಬಳಸಬೇಕು. ಇದರಿಂದ ಅಳತೆ ಮತ್ತು ಇತರ ದೃಷ್ಟಿಗಳಿಂದ ಸರಿಯಾದ ರಂಧ್ರ ಪಡೆಯಬಹುದು. ಇದೇ ರೀತಿ ಮಾತೃಕೆಗಳಲ್ಲಿ (ಮೌಲ್ಡ್ಸ್) ಪೊಳ್ಪಂಡ(ಕೋರ್) ಸರಿಯಾಗಿ ಕೂರದಿದ್ದು ತಿಳಿಯದೆ ಎರಕಹೊಯ್ದರೆ ಅಕೇಂದ್ರಕವಾದ ರಂಧ್ರ ದೊರೆಯುತ್ತದೆ. ಕೊರೆಯುವುದರಿಂದ ಇದನ್ನು ಸರಿಪಡಿಸಬಹುದು.

ಕೊರೆಯುವ ಹತಾರ: ಒಂದು ದಂಡಕ್ಕೆ ಜೋಡಿಸಿರುವ ಅಥವಾ ದಂಡದ ತುದಿಯಲ್ಲಿ ಫೋರ್ಜ್ ಮಾಡಿರುವ ಕಡೆಯುವ ಹತಾರ ಇದು. ಕಡೆಯುವ ಹತಾರದಂತೆ ಇದಕ್ಕೂ ಪಾಶ್ರ್ವ ಇಳಿಜಾರು 60º - 70ºಗಳ ಕರ್ತನ ಕೋನ ಮತ್ತು ಮುಂದಿನ ಹಾಗೂ ಪಾಶ್ರ್ವದ ಶೇಷಾವರಣಗಳು (ಕ್ಲಿಯರೆನ್ಸಸ್) ಇವೆ. ಈ ಹತಾರದ ದುಂಡುಗೊಳಿಸಿದ ಕರ್ತನ ಬಿಂದು ಕಾಯಕಕ್ಕೆ (ಜಾಬ್) ಅತ್ಯಂತ ನುಣುಪಿನ ಒಪ್ಪವನ್ನೂ ಹತಾರಕ್ಕೆ ದೀರ್ಘ ಬಾಳಿಕೆಯನ್ನೂ ಕೊಡುತ್ತದೆ. ಕರ್ತನಧಾರ ಕಾಯಕದ ಅಕ್ಷಕ್ಕೆ ಲಂಬವಾಗಿರದೆ ಲಂಬದಿಂದ 70º ಕೋನದಲ್ಲಿರುತ್ತದೆ. ಇದರಿಂದ ಹುಡಿ ಕೊರೆದ ಭಾಗದಿಂದಾಚೆ ಬೀಳುತ್ತದೆ. ಉಜ್ಜುವುದನ್ನು ತಪ್ಪಿಸುವಷ್ಟು ಮಾತ್ರ ಶೇಷಾವರಣವಿರಬೇಕು. ಹೆಚ್ಚಿದ್ದರೆ ಕರ್ತನಧಾರಕ್ಕೆ ಆಧಾರತಪ್ಪಿ ಒಡೆದು ಮೊಂಡಾಗುತ್ತದೆ. ಅಧಿಕ ಇಂಗಾಲದ ಉಕ್ಕು, ಅಧಿಕ ಜವದ ಉಕ್ಕು, ಸ್ಟೆಲ್ಲೈಟ್ ವಜ್ರಲೇಪಿತಲೋಹ ಮುಂತಾದ ಲೋಹಗಳಿಂದ ಹತಾರವನ್ನು ತಯಾರಿಸಬಹುದು. ಸಣ್ಣ ಕಾಯಕಗಳ ಹತಾರ ಏಕಘಟಕವಾಗಿರಬಹುದು. ಇದನ್ನು ಗುಂಡಗಿರುವ ಅಥವಾ ಆಯಾಕಾರದ ದಂಡದಿಂದ ತಯಾರಿಸಬಹುದು. ದಂಡದ ಉದ್ದ ಮತ್ತು ಕರ್ತನಧಾರದ ಸ್ಥಾನವನ್ನು ಕ್ರಮಪಡಿಸಬಹುದಾದ ಕೊರೆಯುವ ಹತಾರದ ಪಿಡಿ(ಹೋಲ್ಡರ್) ಫೋರ್ಜ್ ಮಾಡಿದ ಹತಾರಕ್ಕಿಂತ ಹೆಚ್ಚು ತೃಪ್ತಿದಾಯಕವಾಗಿರುತ್ತದೆ. ಇದರಲ್ಲಿ ಪಿಡಿಯನ್ನು ಕೆಡಿಸದೆಯೇ ಹತಾರವನ್ನು ಹರಿತಮಾಡುವುದು ಮತ್ತು ಪುನಸ್ಸ್ಥಾಪಿಸುವುದು ಸಾಧ್ಯ. ಆಂತರಿಕ ದಾರಗಳನ್ನು (ಇಂಟರ್ನಲ್ ಥ್ರೆಡ್ಸ್) ಕತ್ತರಿಸಲು ಇದರಿಂದ ಬಹಳ ಅನುಕೂಲ.

ಕೊರೆಯುವ ಯಂತ್ರಗಳು : ಕಡೆಯುವ ಯಂತ್ರದಲ್ಲಿ ಕೊರೆಯುವುದು ಸಾಧ್ಯವಾದರೂ ಕೊರೆಯುವುದಕ್ಕೆಂದೇ ನಿರ್ಮಿಸಿದ ಕೊರೆಯುವ ಯಂತ್ರಗಳುಂಟು. ಭೂಲಂಬೀ ಮತ್ತು ಕ್ಷಿತಿಜೀಯ ಯಂತ್ರಗಳೆಂದು ಇವುಗಳಲ್ಲಿ ಎರಡು ವಿಧ. ಭೂಲಂಬೀ ಯಂತ್ರದಲ್ಲಿ ಕಾಯಕಪೀಠ ಒಂದು ಭೂಲಂಬೀ ಅಕ್ಷದಲ್ಲಿ ತಿರುಗುತ್ತದೆ.  ಪೀಠದ ಮೇಲ್ಗಡೆ ಕರ್ತಕವನ್ನು ಜೋಡಿಸಿದ್ದು ಅದನ್ನು ಯಾವುದೇ ಸ್ಥಾನದಲ್ಲಿ ಕೆಳಗೆ ಮೇಲೆ ಅಥವಾ ಅಡ್ಡಲಾಗಿ ಪ್ರಭರಣ (ಫೀಡ್) ಮಾಡಬಹುದು. ಈ ಸಾಧ್ಯತೆಗಳಿಂದಾಗಿ ಕೊರೆಯುವುದರಷ್ಟೆ ಸುಲಭವಾಗಿ ಕಡೆಯುವುದು ಮತ್ತು ಮುಖನುಣುಪು ಸಹ ಸಾಧ್ಯ. ಕ್ಷಿತಿಜೀಯ ಯಂತ್ರದಲ್ಲಿ ಕರ್ತಕ ಕ್ಷಿತಿಜೀಯ ಅಕ್ಷದಲ್ಲಿ ತಿರುಗುತ್ತದೆ. ಇಲ್ಲಿ ಚಲಿಸಬಹುದಾದ ಪೀಠದ ಮೇಲೆ ಕಾಯಕವನ್ನು ನಿಶ್ಚಲವಾಗಿಡುವ ಏರ್ಪಾಡಿದೆ. ಕರ್ತಕವಿರುವ ಒಂದು ತಿರುಗುವ ದಂಡ ಭೂಲಂಬೀಯವಾಗಿ ಕ್ರಮಗೊಳಿಸಬಹುದಾದ ಶೀರ್ಷದಿಂದ ಕಾಯಕಕ್ಕೆ ಪ್ರಭರಣವನ್ನೊದಗಿಸುತ್ತದೆ.

ಈ ಯಂತ್ರಗಳಿಂದ ಆಂತರಿಕ ಸಂವಾಟಗಳನ್ನೂ(ಟೇಪರ್) ಕೊರೆಯಬಹುದು. ಇದಕ್ಕಾಗಿ ಮೊದಲೇ ಬೈರಿಗೆ ಕ್ರಿಯೆಯಿಂದ ಸೂಕ್ತ ಅಳತೆಯ ಸಮಾಂತರ ರಂಧ್ರ ಮಾಡಿ ಅನಂತರ ಸಂವಾಟಕರ್ತಕದ ಸಹಾಯದಿಂದ ಸಂವಾಟವನ್ನು ಕೊರೆಯಬಹುದು. 
                                                      			 (ಕೆ.ಆರ್.ಎಂಒ.)

ಭೂವಿಜ್ಞಾನದಲ್ಲಿ ಕೊರೆತ: ಹೆಚ್ಚು ಕಠಿಣವಾದ ಭೂಮಿ ಅಥವಾ ಬಂಡೆಗಳಲ್ಲಿ ಬೈರಿಗೆ ಉಪಯೋಗಿಸಿ ರಂಧ್ರಗಳನ್ನು ತೆಗೆಯುವ ವಿಧಾನ (ಡ್ರಿಲ್ಲಿಂಗ್). ಗಣಿಕಾರ್ಯಾಚರಣೆಯಲ್ಲಿ ಇದರ ಪಾತ್ರ ಬಹು ಮುಖ್ಯ. ಕಠಿಣವಾದ ಅದುರನ್ನು ಕತ್ತರಿಸಲು ಸಣ್ಣ ಹ್ಯಾಮರ್ ಬೈರಿಗೆಯ ಸಹಾಯದಿಂದ 1.2-1.5 ಮೀ. ಆಳದ ರಂಧ್ರವನ್ನು ಕೊರೆದು ಸಿಡಿಮದ್ದನ್ನು ತುಂಬಿ ಸಿಡಿಸಲಾಗುವುದು. ಅನಾವೃತಗಣಿಗಳಲ್ಲಿ ಎಂಪೈರ್ ಬೈರಿಗೆ ಅಥವಾ ವ್ಯಾಗನ್ ಬೈರಿಗೆಗಳ ಸಹಾಯದಿಂದ 200-300 ಮಿ ಮೀ. ವ್ಯಾಸ ಮತ್ತು 3-4 ಮೀ. ಆಳವುಳ್ಳ ರಂಧ್ರಗಳನ್ನು ಕೊರೆದು ಅತಿ ಹೆಚ್ಚು ಶಕ್ತಿಯುಳ್ಳ ಸಿಡಿಮದ್ದನ್ನು ತುಂಬಿ ಸಿಡಿಸಲಾಗುವುದು. ಮುಖ್ಯವಾಗಿ ಕೊರೆಯುವಿಕೆಯಿಂದ ಭೂಮಿಯಲ್ಲಿ ಅದುರು ಸಂಶೋಧನೆ ಮಾಡಲು ಮತ್ತು ರಂಧ್ರ ಬಾವಿ ತೆಗೆಯಲು ಸಹಾಯವಾಗುತ್ತದೆ. ಹೆಚ್ಚಿನ ಆಳದ ರಂಧ್ರಗಳನ್ನು ಕೊರೆಯುವಾಗ ವಜ್ರಬೈರಿಗೆಯ ಉಪಯೋಗವನ್ನು ಪಡೆಯಲಾಗುವುದು.		(ಟಿ.ಟಿ.)    
                                                          
ರಾಸಾಯನಿಕ ಕೊರೆತ: ರಾಸಾಯನಿಕಗಳ ನೆರವಿನಿಂದ ವಸ್ತುಗಳನ್ನು ಕೊರೆಯುವ ವಿಧಾನ (ಎಚ್ಚಿಂಗ್). ಉದಾಹರಣೆಗೆ ಗಾಜಿನ ಮೇಲೆ ಕೊರೆಯಲು ಹೈಡ್ರೋಫ್ಲೂರಿಕಾಮ್ಲವನ್ನು(ಊಈ) ಬಳಸುತ್ತಾರೆ. ಗಾಜಿನ ಪದಾರ್ಥದ ಮೇಲೆ ಮೇಣವನ್ನು ಲೇಪಿಸಿ, ಆ ಮೇಣದಲ್ಲಿ ಬೇಕಾದ ಅಕ್ಷರಗಳನ್ನೋ ಆಕೃತಿಯನ್ನೋ ಚಿತ್ರವನ್ನೋ ಕೊರೆದು ಅದನ್ನು ಒಂದು ಸೀಸದ ಪಾತ್ರೆಯಲ್ಲಿರುವ ಹೈಡ್ರೋಫ್ಲೂರಿಕಾಮ್ಲ ದ್ರಾವಣದಲ್ಲಿ ಅದ್ದಿ ಇಡುತ್ತಾರೆ; ಅಥವಾ ಊಈ ಅನಿಲದಲ್ಲಿ ಇಡುತ್ತಾರೆ. ಮೇಣವಿಲ್ಲದಿರುವ ಜಾಗದಲ್ಲಿ ಗಾಜು ಕರಗಿ ಚಿತ್ರ ಕೊರೆಯಲ್ಪಡುತ್ತದೆ. ಅನಂತರ ಟರ್ಪೆನ್‍ಟೈನ್ ಎಣ್ಣೆಯಿಂದ ಮೇಣವನ್ನು ತೆಗೆಯುವರು. ಅನಿಲವನ್ನು ಬಳಸಿದಾಗ ಕೊರೆತ ಮಸುಕಾಗಿರುತ್ತದೆ. ದ್ರಾವಣವನ್ನು ಬಳಸಿದಾಗ ಹೊಳಪು ಬಂದಿರುತ್ತದೆ. ಅದು ಪಾರದರ್ಶಕವಾಗಿಯೂ ಇರುವುದು. (ಎನ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ